ಕೈರೋನಾಮಿಡೀ

	 ಕೀಟವರ್ಗದ ಡಿಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಟೆಂಡಿಪೆಡಿಡೀ ಎಂಬುದು ಇದರ ಪರ್ಯಾಯ ನಾಮ. ಸೊಳ್ಳೆಗಳನ್ನು ಹೋಲುವ ಮತ್ತು ಸಾಮಾನ್ಯವಾಗಿ ಮಶಕಗಳೆಂದು (ಮಿಜಸ್) ಕರೆಯಲಾಗುವ ಕೀಟಗಳನ್ನೊಳಗೊಂಡಿದೆ. ಈ ಕುಟುಂಬದಲ್ಲಿ ಸುಮಾರು 2,000 ಪ್ರಭೇದಗಳಿವೆ. ಪ್ರಪಂಚದಾದ್ಯಂತ ಇವುಗಳ ವ್ಯಾಪ್ತಿ ಉಂಟು. ಬಹುಪಾಲು ಬಗೆಯವು ಜಲವಾಸಿಗಳು; ಕೆಲವು ನದಿ, ಕೊಳ, ಸರೋವರ ಇಲ್ಲವೆ ಜಲಾಶಯಗಳಲ್ಲಿ ವಾಸಿಸುತ್ತವೆ, ಇನ್ನು ಕೆಲವು ಸಮುದ್ರತೀರಗಳಲ್ಲೂ ವಾಸಿಸುವುದುಂಟು. ಮತ್ತೆ ಕೆಲವು ಭೂವಾಸಿಗಳು; ಕೊಳೆಯುತ್ತಿರುವ ಸಸ್ಯರಾಶಿ, ಸಗಣಿ, ಬೂಷ್ಟು, ಮರದ ತೊಗಟೆ ಮುಂತಾದೆಡೆಗಳಲ್ಲಿ ಜೀವಿಸುತ್ತವೆ. ಜಲವಾಸಿ ಮಶಕಗಳು ಸಾಮಾನ್ಯವಾಗಿ ಸೂಕ್ಷ್ಮವಾದ ಕೊಳವೆಗಳನ್ನೊ ಗೂಡುಗಳನ್ನೊ ರಚಿಸಿಕೊಂಡು ಅವುಗಳೊಳಗೆ ವಾಸಿಸುತ್ತವೆ.

	ಕೈರೊನಾಮಿಡೀ ಮಶಕಗಳು ಬಲು ಚಿಕ್ಕ ಗಾತ್ರದ ಕೀಟಗಳು. ಸಾಮಾನ್ಯವಾಗಿ 5 ಮಿಮೀ. ಉದ್ದ ಇರುತ್ತವೆ. ತಲೆ ಪುಟ್ಟದು. ಕುಡಿಮೀಸೆಗಳು 5-14 ತುಂಡುಗಳನ್ನೊಳಗೊಂಡಿವೆ. ಗಂಡಿನಲ್ಲಿ ಕುಡಿಮೀಸೆಗಳ ಮೇಲೆಲ್ಲ ನವಿರಾದ ಕೂದಲಿನಂಥ ರಚನೆಗಳಿವೆ. ಬಾಯತುದಿಯಲ್ಲಿ ಚಿಕ್ಕದಾದ ಸೊಂಡಿಲಿದೆ. ಕಾಲುಗಳು 3 ಜೊತೆ ; ಉದ್ದವಾಗಿಯೂ ತೆಳುವಾಗಿಯೂ ಇವೆ. ಚೆನ್ನಾಗಿ ರೂಪುಗೊಂಡ ಇಲ್ಲವೆ ಕ್ಷೀಣವಾಗಿರುವ 2 ರೆಕ್ಕೆಗಳಿವೆ. ಕೆಲವು ಪ್ರಭೇದಗಳಲ್ಲಿ ರೆಕ್ಕೆಗಳೇ ಇಲ್ಲ. (ಉದಾಹರಣೆಗೆ ಜಪಾನಿನಲ್ಲಿರುವ ಕ್ಲೂನಿಯೊ ಪ್ಯಾಸಿಫಿಕಸ್ ಎಂಬ ಪ್ರಭೇದದ ಹೆಣ್ಣು ಮಶಕಗಳು.) ಮಶಕಗಳ ಉದರ ಭಾಗ ಬಲು ಉದ್ದವಾಗಿಯೂ ತೆಳುವಾಗಿಯೂ ಇದೆ.

	ಈ ಕೀಟಗಳು ಸಾಮಾನ್ಯವಾಗಿ ಸಂಜೆಯ ಹೊತ್ತು ದೊಡ್ಡ ದೊಡ್ಡ ಗುಂಪುಗಳಲ್ಲಿ ಗುಂಯ್‍ಗುಡುತ್ತ ಹಾರಾಡುತ್ತಿರುತ್ತವೆ. ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲೆ ಇಲ್ಲವೆ ಲೋಳೆಯಂಥ ವಸ್ತುವಿನಿಂದ ರಚಿತವಾದ ಉದ್ದನೆಯ ಪಟ್ಟಿಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಡಿಂಬಗಳು ಸಾಮಾನ್ಯವಾಗಿ ಜಲವಾಸಿಗಳು. ಕೊಳವೆಯಾಕಾರದ ಇವು ನೀರಿನಲ್ಲಿ ಸೊಳ್ಳೆಗಳ ಡಿಂಬಗಳಂತೆಯೇ ಈಜಾಡುತ್ತ ಕೆಲವು ದಿನಗಳಾದ ಮೇಲೆ ಕೋಶಾವಸ್ಥೆಯ ಹಂತ ದಾಟಿ ಮಶಕಗಳಾಗಿ ಪರಿವರ್ತನೆಯಾಗುತ್ತವೆ. ಕೆಲವು ಪ್ರಭೇದಗಳ ಡಿಂಬಗಳಲ್ಲಿ ಹೀಮೋಗ್ಲಾಬಿನ್ ವರ್ಣಕವಿದೆ. ಇದರಿಂದಾಗಿ ಕೆಂಪಾದ ಡಿಂಬಗಳಿಗೆ ರಕ್ತಹುಳುಗಳೆಂಬ ಹೆಸರು ರೂಢಿಯಲ್ಲಿದೆ. ಡಿಂಬಗಳು ಮೀನುಗಳು ಪ್ರಮುಖ ಆಹಾರ ಎನಿಸಿವೆ.

	ಕೈರೊನಾಮಿಡೀ ಕುಟುಂಬದ ಕೆಲವು ಮುಖ್ಯ ಪ್ರಭೇದಗಳಿವು : ಕೈರೊನಾಮಸ್ ಕ್ರಿಸ್ಟೇಟಸ್, ಕೈ. ಜಿóಲ್ಯಾಂಡಿಕಸ್, ಕೈ. ಫೆರುಜಿನಿಯವಿಟೇಟಸ್, ಹ್ಯಾಲಿರೈಟಸ್ ಜಾತಿ, ಕ್ಲೂನಿಯೊ ಮ್ಯೂರಿನಸ್, ತಲಾಸೊಮೈಯಿಯ ಫ್ರಾಯೆನ್‍ಫೀಲ್ಡಿ, ಪಾಂಟೊಮೈಯಿಯ ನೇಟನ್ಸ್, ಪಾಲಿಪೋಡಿಯಮ್ ವ್ಯಾಂಡರ್‍ಪ್ಲಾಂಕೈ ಇತ್ಯಾದಿ.
(ವಿ.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ